ಜನವರಿ 12, 2017 ರಂದು ಶ್ರೀ ವಿವೇಕಾನಂದರ ಜನ್ಮ ದಿನದಂದು ಉಡುಪಿಯ ಗಾಂಧಿ ಆಸ್ಪತ್ರೆ ಹಾಗು ಅಲ್ಲಿನ ಪಂಚಮಿ ಟ್ರಸ್ಟ್ ಮುಖಾಂತರ ಆರಂಭವಾದ ಸುಂದರ ಉಡುಪಿಯ ಸಾಕಾರಕ್ಕೆ ಸಾಥ್ ನೀಡಿದ ಆರೋಗ್ಯ ಕಾರ್ಯಕರ್ತರ ಸೇವೆಗೆ ಇದೀಗ ಪಂಚಮ ವರುಷ ಪೂರ್ಣಗೊಂಡಿದೆ.
ನಮ್ಮ ದೇಶದ ಸ್ವಚ್ಚತೆ ನಮ್ಮೆಲ್ಲರ ಹೊಣೆ,ಸ್ವಚ್ಛ ಸುಂದರ ಉಡುಪಿ ನಗರ ಜನಾರೋಗ್ಯಕ್ಕೆ ಆಧಾರ ಎಂಬ ಘೋಷಣಾ ವಾಕ್ಯದೊಂದಿಗೆ ಕಳೆದ 260 ವಾರಗಳಿಂದ ಪ್ರತಿ ಭಾನುವಾರ ಬೆಳಿಗ್ಗೆ 6 ರಿಂದ 7 ಗಂಟೆವರೆಗೆ ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಕಲ್ಸಂಕ ವೃತ್ತದವರೆಗೆ ನಿರಂತರವಾಗಿ ಈ ಸ್ವಚ್ಚತಾ ಅಭಿಯಾನ ನಡೆಸುತ್ತಾ ಬಂದಿದೆ.ಇದರೊಂದಿಗೆ ಜನಜಾಗೃತಿ ಅಂಗವಾಗಿ ಪರಿಸರದ ಸ್ವಚ್ಚತೆ ಕಾಪಾಡಲು ಕಲ್ಸಂಕ ರಾಜ ಮಾರ್ಗದ ಇಕ್ಕೆಲಗಳಲ್ಲಿ ಕಾಗದ ಹಾಗು ಪ್ಲಾಸ್ಟಿಕ್ ಪೊಟ್ಟಣ ಹಾಕಲು ಕಸದ ಬುಟ್ಟಿಯನ್ನು ಒದಗಿಸಿದ್ದೇ ಅಲ್ಲದೆ ರಸ್ತೆಯ ವಿಭಾಜಕದುದ್ದಕ್ಕೂ ಗಿಡಗಳನ್ನು ನೆಟ್ಟು ಪಂಚಮಿ ಟ್ರಸ್ಟ್ ಮುಖಾಂತರ ಪೋಷಿಸಲಾಗುತ್ತಿದೆ.ಈ ಸ್ವಚ್ಛತಾ ಅಭಿಯಾನದ ಐದು ವರುಷಗಳು ಪೂರ್ಣಗೊಂಡ ಈ ಸಂದರ್ಭದಲ್ಲಿ ಸ್ವಚ್ಚತಾ ಅಭಿಯಾನದ ಕಾರ್ಯ ಕರ್ತರೊಂದಿಗೆ ಉಡುಪಿಯ ಪ್ರಖ್ಯಾತ ವೈದ್ಯ ಎ ವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ.ಪಿ ವಿ ಭಂಡಾರಿಯವರು ಭಾಗವಹಿಸಿ ಫುಟ್ ಪಾತ್ ಗಳಿಗೆ ಸುಣ್ಣ ಬಣ್ಣವನ್ನು ಬಳಿಯುವುದರ ಮೂಲಕ ಸ್ವಯಂ ಸೇವಕರನ್ನು ಹುರಿದುಂಬಿಸಿದರು.